Wednesday, September 10, 2008

ಅ-ಪಕ್ವ

ಇಷ್ಟರಲೆ ನಿಮ್ಮನ ನೋಡಲು ಕಾತರಿಸುತಿರುವೆ ನಾನು
ಅಪ್ಪಿ ಮುದ್ದಾಡಲು ನನಗಿರುವ ತವಕ ನೀವರಿಯರೇನು

ನಿಮ್ಮೊಂದಿಗೆ ಹಗಲವರೆಗೆ ಮಾತಾಡುವ ಬಯಕೆ
ಆದರೇನೋ ಈಗೀಗ ಪ್ರೀತಿ ಕಮ್ಮಿಯಾಗಿದೆಯೆಂಬ ಎಣಿಕೆ

ಬಹುಶಃ ಈ ಸಮಯದಲಿ ಇದೆಲ್ಲ ನಾರ್ಮಲ್
ಈ ಹುಚ್ಚು ಮನಸಾಗುತಿದೆ ಹೈಪರ್ ಮತ್ತೆ ಅಬ್ನಾರ್ಮಲ್

ನಾವು ಒಬ್ಬರನೊಬ್ಬರು ಇನ್ನ್ನೂ ಮಾಡಿಕೊಳ್ಳಬೇಕು ಅರ್ಥ
ಚಿಕ್ಕದೊಡ್ಡ ಕಷ್ಟಗಳ ಧೈರ್ಯದಿ ಎದುರಿಸಬೇಕು ನನ್ನ ಭವಿಷ್ಯದ ಭಾರ್ಯೆ

ಆರಂಭದಲಿನ ಆ ಬಿಸಿ ಮತ್ತು ಮಧುರ ಖುಸಿ
ಆಗದಿರಲಿ ಹುಸಿ ಮತ್ತು ಮನಸ್ಸಿಗಾದ ಘಾಸಿ

ನಮ್ಮ ನಡುವಿನ ಈ ಸಂಬಂಧ ಬಲಿಯುತಿದೆ
ಈ ಗಿಡವ ಆಲದಮರವಾಗಿ ಬೆಳಸ ಬೇಕಾಗಿದೆ

Tuesday, September 09, 2008

ಅ-ಪೂರ್ಣ

ಒ ನನ್ನ ನಲ್ಮೆಯ ಪೂರ್ಣ
ನೀನಿಲ್ಲದೆ ಬದುಕು ಅಪೂರ್ಣ

ನೀ ಬಂದೆ ಬದುಕಿಗೆ ತಂಗಾಳಿಯಂತೆ
ನೀ ಹಾರಿಸಿದೆ ಹೃದಯ ಕಳ್ಳಿಯಂತೆ

ನೀನು ನನ್ನ ಚಿನ್ನ ನನ್ನ ಬಂಗಾರಿ
ನಮ್ಮ ನಡುವಿದೆ ಈ ಹಾಳು ದೂರರಿ

ನಿನ್ನ ಪ್ರೀತಿಯಲಿ ನಾನು ಕೊಚ್ಚಿ ಹೋದೆ
ನಿನ್ನ ಗರುಡ ಮಾಲ್ ಫೊಟೊ ನೋಡಿ ಬೆಚ್ಚಿ ಹೋದೆ

ಪ್ರೀತಿಯ ಮಾತು ಎಂದರೆ ನಿನಗೆ ಮುಜುಗರ
ನೀನು ನಾಚುವ ವರಸೆ ಕಂಡರೆ ನನಗೆ ಸಡಗರ

ಒ ನನ್ನ ನಲ್ಮೆಯ ಪೂರ್ಣ
ನೀನಿಲ್ಲದೆ ಬದುಕು ಅಪೂರ್ಣ

ಬೆಳ್ಳಕ್ಕಿ

ಬಾನಲ್ಲಿ ಸಂತೋಷದಿ ಹಾರಿದ್ದ ಬೆಳ್ಳಕ್ಕಿ ನಾ
ಇರಲಿಲ್ಲ ನನಗ್ಯಾವ ಬೇಲಿ
ನೀ ಪ್ರೀತಿ ಮಾತಾಡುತ ಬಲೆ ಬೀಸಿ ನಾ ಸಿಕ್ಕಿದೆ
ಹೊಸ ಪ್ರೇಮ ಸವಿ ಜಾಲದಲ್ಲಿ
ನಿನ್ನಾಟ ಆತಂಕ ತಾಪ ನನ್ನ ಮನಸಾ ತಾಕದೇನು?

ಹಂಬಲ

ನಾ ಬಲ್ಲೆ ನಮ್ಮ ಮದ್ಯವಿದೆ ಸಾಗರ ಎಂದು
ನಾ ಹಂಬಲಿಸುವೆ ಈ ದೂರವಿರದಿರಲಿ ಎಂದು

ನಾ ಪ್ರತಿದಿನ ಪ್ರಾತಃಸ್ಮರಣೆ ಮಾಡುವೆ ನಿನ್ನ
ನಾ ಪ್ರತಿದಿನ ಪ್ರತಿಕ್ಷಣ ಬಯಸುವೆ ನಿನ್ನ

ನಮ್ಮಿಬ್ಬರ ನಡುವಿದೆ ದೂರ ಈ ಸಮಯದಿ
ಆದರೇನು ನೀನಿರುವೆ ನನ್ನ ಮನಸಲಿ ಹೃದಯದಿ

ಪ್ರತಿದಿನ ಪ್ರತಿಕ್ಷಣ ಮುಂಜಾನೆಯಿಂದ ಮುಂಜಾನೆಯವರೆಗೂ
ಚಿಂತಿಸುವೆ ನೀನೆಂದು ಬರುವೆ ನನ್ನೊಡನಿರಲು ಕೊನೆಯವರೆಗೂ

Friday, February 09, 2007

ಶೋಧ :)

ನಿನ್ನದೇ ಕನಸು ದಿನವೆಲ್ಲಾ
ಆದರೆ ನೀನಾರೋ ನಾ ಅರಿಯೆ
ನೀ ಎಲ್ಲಿರುವೆಯೋ ನಾ ಅರಿಯೆ
ನಿನ್ನ ಹುಡುಕಿದೆ ನಾನು ಜಗವೆಲ್ಲಾ
ಚೆಲುವೆ ನಿನ್ನ ಹುಡುಕಿದೆ
ರೈನ್ ನದಿಯ ತೀರದಲ್ಲಿ
ಈಜಿಪ್ಟಿನ ಪಿರಮಿಡ್ಡುಗಳಲ್ಲಿ
ಮಲೇಷಿಯಾದ ಥಳುಕಿನಲ್ಲಿ
ನೀನೆಲ್ಲೂ ಸಿಗದಾದೆ ಚೆಲುವೆ
ಎಲ್ಲಿರುವೆ ನೀ ಎಲ್ಲಿರುವೆ?

Thursday, February 08, 2007

ಮೂಡಲ ಮನೆಯ ಮುತ್ತಿನ ನೀರಿನ

Movie Name: Belli Moda
Singer: Janaki S
Music Director: Vijayabhaskar
Lyrics: Da Re Bendre

ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ, ನುಣ್ಣನೆ ಎರಕವಾ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೋಯ್ದ, ದೇವನು ಜಗವೆಲ್ಲಾ ತೋಯ್ದ

ಏಲೆಗಳ ಮೇಲೆ, ಹೂಗಳ ಓಳಗೆ
ಅಮೃತದ ಬಿಂದು, ಕಂಡವು ಅಮೃತದಾ ಬಿಂದು

ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದಾ ತಂದು

ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳಾ ಹಾಡು

ಗಂಧರ್ವರ ಸೀಮೆಯಾಯಿತು, ಕಾಡಿನ ನಾಡು
ಕ್ಷಣದೊಳು, ಕಾಡಿನಾ ನಾಡು

Friday, October 06, 2006

ಗೋವಿನ ಹಾಡು - ಧರಣಿ ಮಂಡಲ ಮಧ್ಯದೊಳಗೆ

ಜನಪದ ಗೀತೆ - ಗೋವಿನ ಹಾಡು

ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು ಪರಿಯನಾನೆಂತು ಪೇಳ್ವೆನು

ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು
ಮದನತಿಲಕವ ಹಣೆಯೊಳಿಟ್ಟು ಚದುರಶಿಕೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ ತುಂಗಭದ್ರೆ ನೀನು ಬಾರೆ
ಕಾಮಧೇನು ನೀನು ಬಾರೆಂದು ಪ್ರೇಮದಿಂದಲಿ ಕರೆದನು

ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು

ಗೊಲ್ಲ ಕರೆದಾ ಧ್ವನಿಯು ಕೇಳಿ ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲಕರೆಯಲು ಅಲ್ಲಿ ತುಂಬಿತು ಬಿಂದಿಗೆ

ಒಡನೆದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕ್ಕಾಗಿ
ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ

ಅಟ್ಟಬೆಟ್ಟದ ಕಿಬ್ಬಿಯೊಳಗೆ ಇಟ್ಟಡೆಯಬೆಟ್ಟಾದ ನಡುವೆ
ದಟ್ಟೈಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು

ಹಬ್ಬಿದಾ ಮಲೆಮದ್ಯದೊಳಗೆ ಅರ್ಭುತಾನೆಂತೆಂಬ ವ್ಯಾಘ್ರನು
ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು

ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು
ತುಡುಕಿ ಎರೆದವ ರಭಸದಿಂದೊಗ್ಗೊಡೆದವಾಗಾ ಗೋವ್ಗಳು

ಅದರ ರಭಸಕೆ ನಿಲ್ಲನರಿಯದ ಕದುಬಿಕಮರಿಯ ಬಿದ್ದು ಪಶುಗಳು
ಪದರಿತಳ್ಳಣಗೊಂಡ ಪಶುಗಳು ಚೆದರಿ ಓಡಿಹೋದವು

ಕನ್ನೆಮಗನಾ ಪಡೆದುಕೊಂಡು ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಎಂಬ ಪಶುವು ಚೆನ್ನಾಗಿ ತಾ ಬರುತಿದೆ

ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟವ್ಯಾಘ್ರನು
ಬಂದು ಬಳಸಿ ಅಡ್ಡಕಟ್ಟಿಕೊಂಡಿತಾಗ ಪಶುವನು

ಖೂಳ ಹುಲಿಯಾ ಅಡ್ಡಕಟ್ಟಿ ಬೀಳಹೊಯ್ವೆನು ನಿನ್ನನೆನುತಲಿ
ಸೀಳಿಬಿಸುಡುವೆ ಬೇಗನೆನುತಾ ಪ್ರಳಯವಾಗಿಯೆ ಕೋಪಿಸೆ

ಒಂದು ಬಿನ್ನಹ ಹುಲಿಯರಾಯನೆ ಕಂದನೈದನೆ ಮನೆಯಒಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವೆ

ಹಸಿದವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ
ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು

ಮೂರುಮೂರ್ತಿಗಳಾಣೆ ಬರುವೆನು ಸೂರ್ಯಚಂದಮನಾಣೆ ಬರುವೆನು
ಧಾರುಣಿದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು

ಬರುವೆಂದು ಭಾಷೆಮಾಡಿ ತಪ್ಪೆನೆಂದಾ ಪುಣ್ಯಕೋಟಿಯು
ಒಪ್ಪಿಸಲೊಡೊಂಬುಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು

ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡೀಗೆ ಬಂದು
ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು

ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು
ದುಷ್ಟವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೇ

ಕೊಂದೆನೆಂಬ ದುಷ್ಟವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿಪೋಗುವೆ ನೆಂದು ಬಂದೆನು ದೊಡ್ಡಿಗೆ

ಅಮ್ಮನೀನು ಸಾಯಲೇಕೆ ಸುಮ್ಮನಿರು ನೀ ಎಲ್ಲಾರ ಹಾಗೆ
ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾವನಡಗೀ ನಿಂದಿತು

ಕೊಟ್ಟಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು
ನಿಷ್ಟೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ

ಸತ್ಯವೇ ನಮ್ಮತಾಯಿತಂದೆ ಸತ್ಯವೇ ನಮ್ಮ ಸಕಲ ಬಳಗೆ
ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚುತ ಹರಿ ಮೆಚ್ಚನು

ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ ಆರು ನನ್ನಗೆ ಹಿತವರು

ಅಮ್ಮಗಳಿರಾ ಅಕ್ಕಗಳಿರಾ ಎನ್ನತಾಯೊಡಹುಟ್ಟುಗಳಿರಾ
ನಿಮ್ಮ ಕಂದಾನೆಂದು ಕಾಣಿರಿ ತಬ್ಬಲಿಯ ಮಗನೈದನೇ

ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ
ನಿಮ್ಮಕಂದನೆಂದು ಕಂಡಿರಿ ತಬ್ಬಲಿಯ ಕಂದೈದನೆ

ತಬ್ಬಲಿಯುನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗೆವೆನು
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು
ಚೆಂದದಿಂದ ಪುಣ್ಯನದಿಯೊಳು ಮಿಂದು ಸ್ನಾನವ ಮಾಡಿತು

ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲಪೊಕ್ಕು ನಿಂತು
ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು

ಖಂಡವಿದೆಕೋ ರಕ್ತವಿದೆಕೋ ಗುಂಡಿಗೆಯ ಕೊಬ್ಬೂಗಳಿದೆ ಕೋ
ಉಂಡು ಸಂತಸಗೊಂಡು ನೀ ಭೂಮಂಡಲದೊಳು ಬಾಳಯ್ಯನೆ

ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು
ಕನ್ನೆಯಿವಳನು ಕೊಂದುತಿಂದರೆ ಎನ್ನ ನರಹರಿ ಮೆಚ್ಚನು

ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು
ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು

ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ
ನೂಕಿ ನೀನು ಸಾಯಲೇಕೆ ಬೇಕೆಂದೂ ನಾ ಬಂದೆನು

ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರಸುರಿಯುತ
ಅನ್ಯಕಾರಿಯು ತಾನುಎನುತಲಿ ತನ್ನ ಮನದೊಳು ಧ್ಯಾನಿಸಿ

ಮೂರುಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು.

Friday, September 29, 2006

ರತ್ನನ ಪದಗಳು

ಯೆಂಡಾ ಯೆಡ್ತಿ ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ,
ಬುಂಡೇನ್ ಎತ್ತಿ ಕುಡುದ್ ಬುಟ್ಟಾಂದ್ರೆ ತಕ್ಕೋ ಪದಗಳ್ ಬಾಣ.

ಬಗವಂತೇಂದ್ರಾ, ಬೂಮಿಗಿಳ್ದ್ ನಮ್ತಾಕ್ ಬಂದಾಂತನ್ನು,
ಪರ್ ಗಿರೀಕ್ಸೆ ಮಾಡ್ತಾನವ್ನು, ಬಕ್ತನ್ ಮೇಲ್ ಅವನ್ ಕಣ್ಣು.

"ಎಂಡಾ ಕುಡಿಯಾದ್ ಬುಟ್ ಬುಡ್ ರತ್ನಾ", ಅಂತ್ ಅವನೇನಾರಂದ್ರೆ,
ಮೂಗ್ ಮೂರ್ ಚೂರಾಗ್ ಮುರುಸ್ ಕೊಂತೀನಿ ದೇವರ್ ಮಾತಿಗ್ ಅಡ್ ಬಂದ್ರೆ.

"ಎಂಡ ಬುಟ್ಟೆ ಎಡ್ತೀನ್ ಬುಟ್ ಬುಡೇಂತ"ವನೇನಾರಂದ್ರೆ,
ಕಳ್ ದೋಯ್ತಂತ ಕುಣದಾಡ್ತೀನಿ ದೊಡ್ದೊಂದ್ ಕಾಟ ತೊಂದ್ರೆ.

"ಕನ್ನಡ್ ಪದಗಳ್ ಆಡಾದ್ನಲ್ಲಾ ನಿಲ್ಲಿಸ್ ಬಿಡ್ ಬೇಕ್ ರತ್ನಾ",
ಅಂತವ್ನೇನಾರಂದ್ರೆ, ದೇವ್ರಾದ್ರೇನು ಮಾಡ್ತೀನೌನ್ಗೆ ಖತ್ನ.

ಆಗ್ನೇ ಮಾಡೋ ಐಗೋಳೆಲ್ಲಾ ದೇವ್ರೆ ಆಗ್ಲೀ ಎಲ್ಲಾ,
ಕನ್ನಡ್ ಸುದ್ದೀಗೇನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲಾ.

ನರಕಕ್ಕೀಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಾಸಾಕಿದ್ರೂನೆ,
ಮೂಗ್ ನಲ್ ಕನ್ನಡ್ ಪದವಾಡ್ತೀನಿ ನನ್ ಮನಸನ್ನೀ ಕಾಣೆ.

ಎಂಡಾ ಓಗ್ಲಿ, ಎಡ್ತೀ ಓಗ್ಲಿ, ಎಲ್ಲಾ ಕೊಚ್ ಕೊಂಡ್ ಓಗ್ಲಿ,
ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ.

Tuesday, August 22, 2006

ಎಲ್ಲಾದರು ಇರು ಎಂತಾದರು ಇರು

ರಚನೆ: ಕುವೆಂಪು
ಭಾವಗೀತೆ ಸಂಕಲನ: ಕನ್ನಡವೇ ಸತ್ಯ
ಗಾಯನ: ಡಾ.ರಾಜ್‍ಕುಮಾರ್
ಸಂಗೀತ: ಸಿ.ಅಶ್ವಥ್

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮುಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪಿಂಪಿನ ಬನವಾಸಿಗೆ ಕರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೊಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಒಂಪುಳಿಹೋಗುವ ಮನ
ಕನ್ನದವೇ ಸತ್ಯ ಕನ್ನದವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ಮಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ